ಇದು ‘ಮ್ಯಾಟ್ರಿಮೋನಿ ಮನ್ಮಥ’ನ ಕಥೆ.. 9 ಯುವತಿಯರ ಬಾಳಲ್ಲಿ ಚೆಲ್ಲಾಟ!

ಮಂಗಳೂರು: ಮೋಸ ಹೋಗೋರು ಎಲ್ಲಿ ತನಕ ಇರ್ತಾರೋ ಮೋಸ ಮಾಡೋದು ಇದ್ದೇ ಇರ್ತಾರೆ. ಹೌದು ಮ್ಯಾಟ್ರಿಮೋನಿಯಲ್ಲಿ ವರ ಹುಡುಕುವ ಯುವತಿಯರೇ ಒಂದಲ್ಲ, ನೂರು ಬಾರಿ ಯೋಚಿಸಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಈ ಜಾಲದಲ್ಲಿ ಯಾಮಾರಿಸುವವರೇ ಹೆಚ್ಚಾಗಿದ್ದಾರೆ. ಇಂಥಹದ್ದೇ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಯುವತಿಯರು ಬೆಚ್ಚಿಬಿದ್ದಿದ್ದಾರೆ.

ಇದು ‘ಮ್ಯಾಟ್ರಿಮೋನಿ ಮನ್ಮಥ’ನ ಕಥೆ

ಮಂಗಳೂರಿನ ಮ್ಯಾಟ್ರಿಮೋನಿ ಮನ್ಮಥನೋರ್ವ ಒಂದಲ್ಲ, ಎರಡಲ್ಲ, 9 ಯುವತಿಯರಿಗೆ ವಂಚನೆ ಮಾಡಿದ್ದಾನಂತೆ. ಮ್ಯಾಟ್ರಿಮೋನಿ ಆನ್​ಲೈನ್​ನಲ್ಲಿ ಮದುವೆಯ ಹೆಸರಲ್ಲಿ ಯುವತಿಯರಿಗೆ ವಂಚನೆ ಮಾಡಿದ್ದ ಮನ್ಮಥ ಸುಶಾಂತ್ ಪೂಜಾರಿಯನ್ನ ಪೊಲೀಸರು ಬಂಧಿಸಿದ್ದಾರೆ. ಹಸೆಮಣೆ ಏರಿ, ತಾಳಿ ಕಟ್ಟಿ, ಲಕ್ಷ ಲಕ್ಷ ಹಣ ಪೀಕಿದ ನಯಾ ವಂಚಕ ಬಳಿಕ ಯುವತಿಯರಿಗೆ ಕೈ ಕೊಟ್ಟಿದ್ದಾನೆ. ಒಂದಲ್ಲ ಎರಡಲ್ಲ ಈತನಿಂದ ಮೋಸ ಹೋಗಿದ್ದು ಬರೋಬ್ಬರಿ 9 ಹೆಣ್ಣು ಮಕ್ಕಳು. ಈ ಪೈಕಿ ಇಬ್ಬರು ಯುವತಿಯರನ್ನ ಮದುವೆಯಾಗಿದ್ದನಂತೆ ಈ ಭೂಪ.

ಘಟನೆಯ ವಿವರ

ಮುಂಬೈನಲ್ಲಿ ಸಂತ್ರಸ್ತೆಯೋರ್ವಳನ್ನ ಮದುವೆಯಾಗಿ ವಂಚನೆ ಮಾಡಿದ್ದ ಆರೋಪ ಕೂಡ ಈತನ ಮೇಲಿದೆ. ಆಕೆಯ ಬಳಿ ವಂಚಕ ಸುಶಾಂತ್ ಪೂಜಾರಿ, ಹಂತ ಹಂತವಾಗಿ ಸುಮಾರು 6.6 ಲಕ್ಷ ರೂ ಹಣ ಪೀಕಿ ನಾಪತ್ತೆಯಾಗಿದ್ದನಂತೆ. ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದರು. ಪೊಲೀಸರ ವಿಚಾರಣೆ ವೇಳೆ ಮ್ಯಾಟ್ರಿಮೋನಿ ಮನ್ಮಥನ ಕರ್ಮ ಕಾಂಡಗಳು ಬಯಲಾಗಿದೆ. ಈ ಖತರ್ನಾಕ್ ಕಿಲಾಡಿ ವಂಚಿಸಿದ್ದು ಬರೋಬ್ಬರಿ 9 ಯುವತಿಯರನ್ನು, ಮ್ಯಾಟ್ರಿಮೋನಿ ಮೂಲಕವೇ 2021ರಲ್ಲೇ ಉಡುಪಿಯ ಹುಡುಗಿಯೊಬ್ಬಳನ್ನ ಮದುವೆಯಾಗಿದ್ದ ಆಕೆಗೂ ಕೈ ಕೊಟ್ಟಿದ್ದಾನೆ. ಬಳಿಕ ಉಡುಪಿ ಭಾಗದ ಮತ್ತಿಬ್ಬರನ್ನ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾನೆ.

ಆರೋಪಿ ಸುಶಾಂತ್ ಪೂಜಾರಿ ಕೇಸ್ ಹಿಸ್ಟರಿ ಕೆದಕಿದ ಮಂಗಳೂರು ಪೊಲೀಸರೇ ಆತನ ಆಟ ಕಂಡು ಶಾಕ್ ಆಗಿದ್ದಾರೆ. ಮುಂಬೈನ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅವ್ರಿಂದ ಹಣ ಪಡೆದು ಎಸ್ಕೇಪ್ ಆಗಿದ್ದ. ಬಳಿಕ ಬೆಂಗಳೂರಿನಲ್ಲಿ ಇಬ್ಬರು ಹುಡುಗಿಯರನ್ನ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನಂತೆ.  ಕಾರ್ಕಳ ಹುಡುಗಿ ಕೂಡ ಈತನ ಮಾತು ನಂಬಿ ಮೋಸ ಹೋಗಿದ್ದಾಳೆ. ಸುಶಾಂತ್ ಪೂಜಾರಿ ನನ್ನ ಅಳಿಯ ಎಂದು ವಂಚನೆಗೆ ಸಾಥ್ ನೀಡಿದ್ದ ಮೂಲ್ಕಿ ನಿವಾಸಿ ಭಾಸ್ಕರ್​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image