ಇಂದು IAS – IPS ಅಧಿಕಾರಿಗಳ ಹೈವೋಲ್ಟೇಜ್ ಸಮರದ ಅಂತಿಮ ತೀರ್ಪು!

ಇಂದು IAS - IPS ಅಧಿಕಾರಿಗಳ ಹೈವೋಲ್ಟೇಜ್ ಸಮರದ ಅಂತಿಮ ತೀರ್ಪು!

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ಕಾನೂನು ಸಮರದ ಮಹತ್ವದ ತೀರ್ಪು ಇಂದು ಹೈಕೋರ್ಟ್‌ ನೀಡಲಿದೆ. ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಇಂದು ಮಧ್ಯಾಹ್ನ 1.15ಕ್ಕೆ ಪ್ರಕಟಿಸಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಆದೇಶವನ್ನು ನೀಡಲಿದೆ.

ವಿವಾದದ ಹಿನ್ನೆಲೆ

2023ರ ಫೆಬ್ರವರಿಯಲ್ಲಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಖಾಸಗಿ ದೂರು (PCR) ದಾಖಲಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಅವರು ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂಬುದು ರೂಪಾ ಅವರ ಪ್ರಮುಖ ಆರೋಪವಾಗಿದೆ.

ರೋಹಿಣಿ ಸಿಂಧೂರಿ ಪೋಸ್ಟ್‌ನಲ್ಲಿ ಏನಿತ್ತು?

“ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ. ರೂಪಾ ಅವರು ಮಾನಸಿಕ ಸ್ವಾಸ್ಥ್ಯ ಮತ್ತು ಸ್ಥಿಮಿತತೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ಮತ್ತು ದ್ವೇಷಿಸುವವರ ವಿರುದ್ಧ ಹಗೆ ಸಾಧಿಸಲು ಆಧಾರರಹಿತ ಆರೋಪ ಮಾಡುವುದು ಅವರಿಗೆ ಅಭ್ಯಾಸವಾಗಿದೆ” ಎಂದು ರೋಹಿಣಿ ಪೋಸ್ಟ್ ಮಾಡಿದ್ದರು. ಜೊತೆಗೆ ಡಿ. ರೂಪಾಗೆ ‘ಗೆಟ್ ವೆಲ್ ಸೂನ್’ (Get Well Soon) ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದರು.

ಡಿ. ರೂಪಾ ವಾದವೇನು?

ಈ ಪೋಸ್ಟ್‌ಗಳ ಮೂಲಕ ತಮ್ಮನ್ನು ‘ಮಾನಸಿಕ ಅಸ್ವಸ್ಥೆ’ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ. ಇದರಿಂದಾಗಿ ಸರ್ಕಾರವು ತಮಗೆ ಹಲವು ತಿಂಗಳುಗಳಿಂದ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ತೀವ್ರ ಮಾನಸಿಕ ನೋವು ಉಂಟಾಗಿದೆ ಎಂದು ಡಿ. ರೂಪಾ ನ್ಯಾಯಾಲಯದ ಮೊರೆ ಹೋಗಿದ್ದರು.

ಕಾನೂನು ಹೋರಾಟದ ಸದ್ಯದ ಸ್ಥಿತಿ

ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ, ಈ ವಿಚಾರಣೆಯನ್ನು ರದ್ದುಗೊಳಿಸುವಂತೆ ರೋಹಿಣಿ ಸಿಂಧೂರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಮಧ್ಯಾಹ್ನ ಅಂತಿಮ ಆದೇಶ ಹೊರಬೀಳಲಿದೆ.

Be the first to comment

Leave a Reply

Your email address will not be published. Required fields are marked *

ad image