
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ‘ಡ್ಯುರಾಂಡ್ ಲೈನ್’ (Durand Line) ಗಡಿ ವಿವಾದ ಇದೀಗ ಭೀಕರ ಯುದ್ಧದ ಸ್ವರೂಪ ಪಡೆದುಕೊಂಡಿದೆ. ಎರಡು ರಾಷ್ಟ್ರಗಳ ನಡುವೆ ಭಾರೀ ಗುಂಡಿನ ಚಕಮಕಿ, ವೈಮಾನಿಕ ದಾಳಿಗಳು ನಡೆಯುತ್ತಿದ್ದು, ತಾಲಿಬಾನ್ ಪಡೆಗಳು ಬರೋಬ್ಬರಿ 55 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಘೋಷಿಸಿಕೊಂಡಿವೆ. ಶುಕ್ರವಾರ ಮುಂಜಾನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ಸೇನೆ ವೈಮಾನಿಕ ದಾಳಿ (Airstrikes) ನಡೆಸಿದೆ. ಇದಕ್ಕೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಹೇಡಿ ಸೇನೆ ವೈಮಾನಿಕ ದಾಳಿ ನಡೆಸಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಾಲಿಬಾನ್ ಹೇಳಿದ್ದೇನು?
ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಗುರುವಾರ ರಾತ್ರಿ 8 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿರುವುದಾಗಿ ತಿಳಿಸಿದೆ. ಪಾಕಿಸ್ತಾನದ ಮಿಲಿಟರಿ ನಮ್ಮ ಗಡಿಯನ್ನು ಉಲ್ಲಂಘಿಸಿ ಮಹಿಳೆಯರು ಮತ್ತು ಮಕ್ಕಳನ್ನು ಕೊಂದಿದೆ. ಇದಕ್ಕೆ ಪ್ರತಿಯಾಗಿ ಪಕ್ಟಿಕಾ, ಖೋಸ್ಟ್, ನಂಗರ್ಹಾರ್, ಕುನಾರ್ ಪ್ರಾಂತ್ಯಗಳ ಗಡಿಯುದ್ದಕ್ಕೂ ನಾವು ಪ್ರತಿದಾಳಿ ನಡೆಸಿದ್ದೇವೆ. 4 ಗಂಟೆಗಳ ಕಾಲ ನಡೆದ ಈ ಭೀಕರ ಕಾಳಗದಲ್ಲಿ 55 ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಗಿದೆ. ಪಾಕಿಸ್ತಾನದ 2 ಪ್ರಮುಖ ಮಿಲಿಟರಿ ಬೇಸ್ಗಳು ಮತ್ತು 19 ಪೋಸ್ಟ್ಗಳನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಕೆಲವು ಪಾಕ್ ಸೈನಿಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಪಾಕಿಸ್ತಾನದ ಟ್ಯಾಂಕರ್ ಒಂದನ್ನು ಧ್ವಂಸಗೊಳಿಸಲಾಗಿದೆ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಫ್ಘಾನ್ ಪಡೆಗಳು ತಿಳಿಸಿವೆ. ಇದೆ ವೇಳೆ ತಮ್ಮ ಕಡೆಯೂ ಸಾವು-ನೋವು ಸಂಭವಿಸಿದ್ದು 8 ತಾಲಿಬಾನ್ ಹೋರಾಟಗಾರರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅದು ಒಪ್ಪಿಕೊಂಡಿದೆ.
ಪಾಕಿಸ್ತಾನ ಏನು ಹೇಳ್ತು..?
ತಾಲಿಬಾನ್ನ ಈ ಅಂಕಿ-ಅಂಶಗಳನ್ನು ಪಾಕಿಸ್ತಾನ ಕಟುವಾಗಿ ತಿರಸ್ಕರಿಸಿದೆ. ಪಾಕ್ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಮಾತನಾಡಿ, ‘ಕೇವಲ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಆದರೆ ನಮ್ಮ ಪ್ರತಿದಾಳಿಗೆ ಬರೋಬ್ಬರಿ 36 ಅಫ್ಘಾನ್ (ತಾಲಿಬಾನ್) ಹೋರಾಟಗಾರರು ಹತರಾಗಿದ್ದಾರೆ. ನಾವು ಯಾವುದೇ ಪ್ರಚೋದನೆ ಇಲ್ಲದೆ ದಾಳಿ ಮಾಡಿಲ್ಲ. ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ತಕ್ಕ ತಿರುಗೇಟು ನೀಡುತ್ತಿದ್ದೇವೆ ಎಂದಿದ್ದಾರೆ. ಪಾಕ್ ಪ್ರಧಾನಿಯ ವಕ್ತಾರರು, ಯಾವುದೇ ಪಾಕ್ ಸೈನಿಕರನ್ನು ತಾಲಿಬಾನ್ ಸೆರೆಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡೂ ದೇಶಗಳ ನಡುವಿನ ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆದ ‘ತೊರ್ಖಾಮ್’ ಗಡಿ ಪ್ರದೇಶದಲ್ಲೂ ಭಾರಿ ಕಾಳಗ ಶುರುವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಫ್ಘಾನ್ ಅಧಿಕಾರಿಗಳು ಗಡಿಯ ಬಳಿಯಿರುವ ನಿರಾಶ್ರಿತರ ಶಿಬಿರಗಳನ್ನು ತೆರವುಗೊಳಿಸುತ್ತಿದ್ದಾರೆ. ಇತ್ತ ಪಾಕಿಸ್ತಾನದ ಕಡೆಯೂ ಗಡಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.






Be the first to comment
Leave a Reply