
ಅಸ್ಸಾಂ: ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಅಸ್ಸಾಂನ ಸಿಲ್ಚಾರ್‌ನಲ್ಲಿ ಅತ್ಯಂತ ಅಮಾನುಷ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. 28 ವರ್ಷದ ಯುವತಿಯೊಬ್ಬಳ ಮೇಲೆ 7ಕ್ಕೂ ಹೆಚ್ಚು ಕಾಮುಕರು ಚಾಕು ತೋರಿಸಿ, ಆಕೆಯ ಪ್ರಿಯಕರನ ಮುಂದೆಯೇ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ. ಅಷ್ಟೇ ಅಲ್ಲದೆ ಸಂತ್ರಸ್ತೆಯಿಂದ ಬಲವಂತವಾಗಿ ಹಣ ಸುಲಿಗೆ ಮಾಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 19 ರಂದು ಈ ಭೀಕರ ಘಟನೆ ನಡೆದಿದೆ. ಯುವತಿ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಸಿಲ್ಚಾರ್ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಬೈಪಾಸ್ ರಸ್ತೆಯಲ್ಲಿದ್ದಳು. ಈ ವೇಳೆ ಏಕಾಏಕಿ ಮಹೀಂದ್ರಾ ಥಾರ್ (Mahindra Thar) ವಾಹನದಲ್ಲಿ ಬಂದ 7-8 ಜನರಿದ್ದ ಗುಂಪು ಅವರ ಕಾರನ್ನು ಅಡ್ಡಗಟ್ಟಿದೆ. ದುಷ್ಕರ್ಮಿಗಳು ಮೊದಲು ಜೋಡಿಯ ವಿಚಾರಣೆ ಮಾಡಿದ್ದಾರೆ. ಬಳಿಕ ಪ್ರಿಯಕರನನ್ನು ಬಲವಂತವಾಗಿ ಹಿಡಿದಿಟ್ಟುಕೊಂಡು, ಆತನ ಕಣ್ಣೆದುರೇ ಯುವತಿಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಕಾಮುಕರು ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಯುವತಿಯ ಬ್ಯಾಂಕ್ ಖಾತೆಯಿಂದ ಬಲವಂತವಾಗಿ 10,000 ರೂ.ಗಳನ್ನು ತಮ್ಮ ಖಾತೆಯೊಂದಕ್ಕೆ ಆನ್‌ಲೈನ್ ಮೂಲಕ ವರ್ಗಾವಣೆ (Transfer) ಮಾಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಸಂತ್ರಸ್ತೆ ಎಫ್‌ಐಆರ್‌ನಲ್ಲಿ (FIR) ಉಲ್ಲೇಖಿಸಿದ್ದಾಳೆ. ಈ ಕುರಿತು ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಭಾನುವಾರದ ವೇಳೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿಲ್ಚಾರ್‌ನ ಆಶ್ರಮ್ ರಸ್ತೆ ನಿವಾಸಿಗಳಾದ ನಿಲೋತ್ಪಲ್ ದಾಸ್ (25) ಮತ್ತು ಸುಬೋಲ್ ದಾಸ್ (27) ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನ್ಯಾಯಾಧೀಶರ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






Be the first to comment
Leave a Reply