ಜಿ.ಪಂ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿಗೆ ಜಾಮೀನು

ಬೆಂಗಳೂರು,ಫೆ.27- ಧಾರವಾಡ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಹಲವು ತಿಂಗಳ ಜೈಲು ವಾಸದ ಬಳಿಕ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ವಿನಯ್‌ ಕುಲಕರ್ಣಿ ವಿರುದ್ಧ ದಾಖಲಾಗಿದ್ದ ಈ ಪ್ರಕರಣದಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಅವರು ಇತ್ತೀಚೆಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶರಣಾಗಿದ್ದರು. ಬಳಿಕ ಸುಪ್ರೀಂ ಕೋರ್ಟ್‌ಗೆ ಮೇಲನವಿ ಸಲ್ಲಿಸಿದ್ದರು. ಈ ಮೇಲನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕರೋಲ್‌ ಅವರಿದ್ದ ಪೀಠವು ಜಾಮೀನು ಮಂಜೂರು ಮಾಡಿದೆ.

ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ವಾದ ಮಂಡಿಸಿ, ಈಗಾಗಲೇ ಸಾಕ್ಷ್ಯಗಳ ದಾಖಲಾತಿ ಬಹುತೇಕ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಯಾವುದೇ ರೀತಿಯ ಸಾಕ್ಷ್ಯನಾಶ ಸಾಧ್ಯವಿಲ್ಲ. ಆದ್ದರಿಂದ ಜಾಮೀನು ನೀಡಲು ಅಡ್ಡಿಯಿಲ್ಲ. ಈ ಹಂತದಲ್ಲಿ ಸಾಕ್ಷ್ಯ ನಾಶವಾಗಲಿ ಅಥವಾ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಪ್ರಕರಣದ ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ವಿನಯ್‌ ಕುಲಕರ್ಣಿ ಅವರಿಗೆ ಜಾಮೀನು ನೀಡಿದರೆ ತೊಂದರೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸಂಜಯ್‌ ಕರೋಲ್‌‍, ವಿನಯ್‌ ಕುಲಕರ್ಣಿ ಪ್ರಕರಣದ ಪ್ರಮುಖ ಆರೋಪಿ, ಆದಾಗ್ಯೂ ಸಾಕ್ಷ್ಯಗಳ ವಿಚಾರಣೆ ಮುಕ್ತಾಯವಾಗಿರುವ ಹಿನ್ನೆಲೆ ಜಾಮೀನು ನೀಡಬಹುದು ಎಂದು ಹೇಳಿದರು.

ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಜಾಮೀನು ಮಂಜೂರಿಗೆ ಆದೇಶಿಸಿತು. ಅಲ್ಲದೇ ಇನ್ನೆರಡು ತಿಂಗಳಲ್ಲಿ ವಿಚಾರಣೆ ಆರಂಭಿಸಲು ವಿಚಾರಣಾ ನ್ಯಾಯಲಯಕ್ಕೆ ನಿರ್ದೇಶನ ನೀಡಿತು. ಈ ಹಂತದಲ್ಲಿ ಸಿಬಿಐ ವಕೀಲರು ಆಕ್ಷೇಪ ವ್ಯಕ್ತಪಡಿಸಿ, . ಮತ್ತೊಂದು ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಭಾಗಿಯಾಗಿದ್ದಾರೆ ಎಂದು ಆಕ್ಷೇಪಿಸಿದರು. ಆದರೆ, ಸುಪ್ರೀಂ ಕೋರ್ಟ್‌ ಸಿಬಿಐ ಪರ ವಕೀಲರ ಆಕ್ಷೇಪವನ್ನು ಬದಿಗಿಟ್ಟಿತು.

ಸದ್ಯ ಪ್ರಕರಣ ಮುಕ್ತಾಯ ಹಂತದಲ್ಲಿದ್ದು, ಆರೋಪಿಗಳ ಹೇಳಿಕೆ ದಾಖಲಾಗುತ್ತಿದೆ. ವಕೀಲರ ಕೊನೆಯ ಹಂತದ ವಾದ ಇನ್ನೂ ಬಾಕಿಯಿದೆ. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ವಿನಯ್‌ ಕುಲಕರ್ಣಿ ಅವರ ಜಾಮೀನು ರದ್ದು ಮಾಡುವಂತೆ ಸಿಬಿಐ ಮನವಿ ಮಾಡಿತ್ತು.

ಶಾಸಕ ವಿನಯ ಕುಲಕರ್ಣಿಗೆ ಜಾಮೀನು ಸಿಕ್ಕ ಹಿನ್ನೆಲೆ ಧಾರವಾಡದಲ್ಲಿ ಬೆಂಬಲಿಗರು ಹಾಗೂ ಕಾಂಗ್ರೆಸ್‌‍ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಡಿಸಿ ಕಚೇರಿ ಎದುರು ವಿನಯ್‌ ಪರ ಘೋಷಣೆ ಕೂಗಿದರು.

Be the first to comment

Leave a Reply

Your email address will not be published. Required fields are marked *

ad image